ಶನಿವಾರ, ಜನವರಿ 12, 2013

ವಿವೇಕಾನಂದರಿಗೆ ನುಡಿ ನಮನ - ಇಂದು ರಾಷ್ಟ್ರೀಯ ಯುವ ದಿನ

ವಿವೇಕಾನಂದರಿಗೆ ನುಡಿ ನಮನ - ಇಂದು ರಾಷ್ಟ್ರೀಯ ಯುವ ದಿನ



ಸ್ವಾಮಿ ವಿವೇಕಾನಂದ ಎಂಬ ಅದಮ್ಯ ಚೈತನ್ಯ
“ ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ಏಕೆಂದರೆ ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮರಣ. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಎಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು, ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಇಂಥ ಘೋಷಣೆಯೊಂದಿಗೆ ದೇಶದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಹಾನ್‌ ವ್ಯಕ್ತಿಗಳೇ ಸ್ವಾಮಿ ವಿವೇಕಾನಂದರು. ದೇಶದ ಯುವ ಶಕ್ತಿಗಳಿಗೆ ಆಂತರ್ಯದ ಸತ್ವ ತುಂಬುವಲ್ಲಿ ಯಶಸ್ವಿಯಾದ ಅದ್ಭುತ ತತ್ವಜ್ಞಾನಿಗಳು ಇವರು. ನಮ್ಮ ದೇಶದ ತತ್ವವನ್ನು - ಸತ್ವವನ್ನು ಪ್ರಪಂಚಕ್ಕೆ ಸಾರಿದ ದೇಶದ ಈ ಹೆಮ್ಮೆಯ ಪುತ್ರನಲ್ಲಿತ್ತು ತಾಯ್ನಾಡು ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಅಗಾಧವಾದ ಪ್ರೀತಿ. ಯುವ ಶಕ್ತಿಯೇ ದೇಶದ ಶಕ್ತಿ ಎಂಬ ಘೋಷಣೆ ಸಾರಿದ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವುದರ ಮೂಲಕ ಸರಕಾರ ವಿವೇಕಾನಂದರಿಗೆ ಗೌರವ ಸೂಚಿಸಿದೆ.

‘ಸ್ವಾಮಿ ವಿವೇಕಾನಂದರಾಗುವ ಮೊದಲು ಅಂದರೆ, ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. 1862 ಜನವರಿ 12ರಂದು ಜನಿಸಿದ ನರೇಂದ್ರ, ಮುಂದೆ ಇಡೀ ದೇಶದ ಶಕ್ತಿಯಾಗಿ ಬೆಳೆದರು. ಅತ್ಯಂತ ಚೂಟಿ ಮತ್ತು ತುಂಟತನದ ಸ್ವಭಾವದ ಈ ಬಾಲಕನಲ್ಲಿದ್ದ ಅಧಮ್ಯ ಚೇತನವನ್ನು ಮೊದಲು ಗುರುತಿಸಿದ್ದು ಶಿವಭಕ್ತೆಯಾಗಿದ್ದ ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ. ತನ್ನ ಶಿವಪೂಜೆಯ ಫಲವಾಗಿ ಹುಟ್ಟಿದ್ದ ಮಗ ನರೇಂದ್ರ, ಸಾಕ್ಷಾತ್‌ ಶಿವನೇ ಎಂದು ನಂಬಿದ್ದರು ಅವರು. ನರೇಂದ್ರ ಪುಟ್ಟ ಮಗುವಾಗಿದ್ದಾಗಲೇ ರಾಮಾಯಣ, ಮಹಾಭಾರತ, ಪುರಾಣಗಳನ್ನು ಓದಿ ತಿಳಿಸಿದ್ದರು ತಾಯಿ ಭುವನೇಶ್ವರಿ ದೇವಿ. ವೃತ್ತಿಯಲ್ಲಿ ವಕೀಲರಾಗಿದ್ದ ತಂದೆ ವಿಶ್ವನಾಥದತ್ತ, ದೈವಭಕ್ತರಲ್ಲದಿದ್ದರೂ ಜನಾನುರಾಗಿಗಳಾಗಿದ್ದರು. ಸಾಕಷ್ಟು ದಾನ ಧರ್ಮ ಮಾಡಿ ಜನರ ಪ್ರೀತಿ ಸಂಪಾದಿಸಿಕೊಂಡಿದ್ದರು. ಇಂಥ ಆದರ್ಶ ತಂದೆ-ತಾಯಿಗಳ ಆರೈಕೆಯಲ್ಲಿ ಬೆಳೆದ ನರೇಂದ್ರನಿಗೆ ದೈವಭಕ್ತಿ, ದೇಶಭಕ್ತಿ, ತೀಕ್ಷ್ಣ ಬುದ್ಧಿಶಕ್ತಿ, ಆತ್ಮವಿಶ್ವಾಸ, ನಿರ್ಭಯತೆ ಮತ್ತು ದೃಢತೆ, ಜನ್ಮದತ್ತವಾಗಿ ಬಂದಿತ್ತು.

ಸ್ವಾಮಿ ವಿವೇಕಾನಂದ
1879ರಲ್ಲಿ ಕಲ್ಕತ್ತಾದ ಸ್ಕೊಟಿಷ್‌ಚರ್ಚ್‌ ಕಾಲೇಜಿನಲ್ಲಿ ನರೇಂದ್ರ ನಾಥ ದತ್ತ, ಪಾಶ್ಚಾತ್ಯ ತರ್ಕ, ತತ್ವಶಾಸ್ತ್ರ ಹಾಗೂ ಇತಿಹಾಸವನ್ನು ಅಧ್ಯಯನ ಮಾಡಿದರು. ನಂತರ 1881ರಲ್ಲಿ ಲಲಿತ ಕಲೆಯ ಪದವಿಯನ್ನು ಹಾಗೂ 1884ರಲ್ಲಿ ಕಲಾ ಪದವಿಯನ್ನೂ ಪಡೆದರು. ಇಷ್ಟರಲ್ಲೇ ನರೇಂದ್ರನಾಥ ದತ್ತನಿಗೆ ಶ್ರೀ ರಾಮಕೃಷ್ಣ ಪರಮಹಂಸರ ಪರಿಚಯವಾಗಿತ್ತು. 1881ರಲ್ಲಿಯೇ ಪರಮಹಂಸರನ್ನು ಭೇಟಿಯಾಗಿದ್ದ ನರೇಂದ್ರ, ಮೊದಲ ಭೇಟಿಯಲ್ಲಿಯೇ ರಾಮಕೃಷ್ಣರ ಶಕ್ತಿಯನ್ನು ನಂಬದೇ ಅವರನ್ನು ಪರೀಕ್ಷಿಸುವ ನಿರ್ಧಾರಕ್ಕೆ ಬಂದರು. ಆನಂತರದ ನಿರಂತರ ಒಡನಾಟದಿಂದ ನರೇಂದ್ರನಿಗೆ ರಾಮಕೃಷ್ಣರ ಶಕ್ತಿಯ ಪರಿಚಯವಾಯ್ತು. ಅವರ ಸರಳತೆ, ನಿಶ್ಕಲ್ಮಶ ಭಕ್ತಿ ಮತ್ತು ಸಿದ್ಧಾಂತಗಳಿಗೆ ಆಕರ್ಷಿತರಾದರು. ನರೇಂದ್ರನಲ್ಲಿರುವ ಅಪರಿಮಿತ ಚೈತನ್ಯವನ್ನು ಗುರುತಿಸಿದ ರಾಮಕೃಷ್ಣರು, ಶಿಷ್ಯನನ್ನಾಗಿ ಸ್ವೀಕರಿಸಿ, ವಿವೇಕಾನಂದ ಎಂದು ನಾಮಕರಣ ಮಾಡಿದರು.

ಅಮೇರಿಕಾದ ಚಿಕಾಕೋದಲ್ಲಿ ನಡೆದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯ’ದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ. ‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿ ನೆರೆದಿದ್ದ ಅಸಂಖ್ಯ ಜನರ ಚಿತ್ತವನ್ನು ಗೆದ್ದಿತ್ತು. ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು. ವಿಶ್ವ ಪರ್ಯಟನೆ ಮಾಡಿ ಹಿಂದೂ ಧರ್ಮದ ಸಿದ್ಧಾಂತಗಳು ಹಾಗೂ ಮೌಲ್ಯಗಳನ್ನು ಪರಿಚಯ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರ ಎಲ್ಲಾ ಭಾಷಣಗಳು ಈಗ ಪುಸ್ತಕ ರೂಪದಲ್ಲಿವೆ. ಅವುಗಳನ್ನು ಹಿಂದೂ ಧರ್ಮದ ಯೋಗ ಸಿದ್ಧಾಂತಗಳಾಗಿ ಪರಿಗಣಿಸಲಾಗಿದೆ. ಅಮೇರಿಕಾದ ‘ಸರ್ವಧರ್ಮ ಸಮ್ಮೇಳನ’ದ ನಂತರ ತಾಯ್ನಾಡಿಗೆ ಮರಳಿದ ವಿವೇಕಾನಂದರು ಗುರು ರಾಮಕೃಷ್ಣ ಪರಮಹಂಸರ ಸ್ಮರಣಾರ್ಥ 1892, ಮೇ 1ರಂದು ‘ರಾಮಕೃಷ್ಣ ಮಿಶನ್‌’ ಸ್ಥಾಪಿಸಿದರು.

ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತ 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆ ವಿವೇಕಾನಂದರಿಂದ ಜಗತ್‌ಪ್ರಸಿದ್ಧವಾಯ್ತು. ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ರಾಮಕೃಷ್ಣ ಮಿಶನ್‌ಗುರುತಿಸಿಕೊಂಡಿತು.

ಕಾಳಿಯ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು ಹಾಗೂ ಅವರ ಪತ್ನಿ ಮಾತೆ ಶಾರದಾ ದೇವಿಯವರ ನೆಚ್ಚಿನ ಶಿಷ್ಯರಾಗಿದ್ದ ವಿವೇಕಾನಂದರು, ತಮ್ಮದೇ ಆದ ವೈಚಾರಿಕ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಂಡರು.
‘ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ್ಯವೇ, ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು ಹೊರಗೆಡಹುತ್ತದೆ’ ಎಂದು ಬೋಧಿಸಿದ ವಿವೇಕಾನಂದರು ಬಡವರ, ನೊಂದವರ, ಸಮಾಜದಲ್ಲಿ ತುಳಿತಕ್ಕೊಳಗಾದವರ ಕಷ್ಟಕ್ಕೆ ಸ್ಪಂದಿಸಿದರು. ‘ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!’ ಇದು ಯುವ ಶಕ್ತಿಗಳಲ್ಲಿರುವ ಉತ್ಸಾಹವನ್ನು ಬಡಿದೆಬ್ಬಿಸಲು ವಿವೇಕಾನಂದರು ಘೋಷಿಸಿದ ಪ್ರೋತ್ಸಾಹ ವಾಕ್ಯ. ಇದು ಬಿಸಿರಕ್ತದ ಯುವ ಚೈತನ್ಯವನ್ನು ಜಾಗೃತಗೊಳಿಸುವ ಮಂತ್ರವಾಯಿತು. ಗಾಂಭೀರ್ಯ, ಸರಳತೆ, ಧೈರ್ಯ, ಅಸ್ವಾರ್ಥತೆ, ದಯೆ, ಸೇವಾಶಕ್ತಿಯಿಂದಲೇ ದೇಶದ ಜನತೆಯನ್ನು ಗೆದ್ದ ಸ್ವಾಮಿ ವಿವೇಕಾನಂದರು ತಮ್ಮ 29 ನೇ ವಯಸ್ಸಿನಲ್ಲಿ ಧೈವಾಧೀನರಾದರು. ಅತೀ ಚಿಕ್ಕ ವಯಸ್ಸಿನಲ್ಲಿ ಮಹಾ ಸಾಧನೆ ತೋರಿದ ಈ ಶಕ್ತಿ ಅಸ್ತಂಗತವಾದ ದಿನ 1902ರ ಜುಲೈ 4.

ಯುವ ಜನತೆಗೆ ಪ್ರೋತ್ಸಾಹಿಸಿ, ಆ ಮೂಲಕ ಯಶಸ್ವಿ ಮಾರ್ಗವನ್ನು ಸೂಚಿಸಿದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆ ಇವತ್ತು. ಯುವ ಶಕ್ತಿಯ ದ್ಯೋತಕವಾಗಿದ್ದ ವಿವೇಕಾನಂದರ ಸ್ಮರಣಾರ್ಥ ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ.

ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು

ಶುಕ್ರವಾರ, ಡಿಸೆಂಬರ್ 21, 2012

ಗಾಂಧಿಗೂ ಒಬ್ಬ Lover ಇದ್ದಳು!

ಗಾಂಧಿಗೂ ಒಬ್ಬ Lover ಇದ್ದಳು!


ಗಾಂಧೀಗೂ ಒಂದು ಅಫೇರ್ ಇತ್ತು!? ಮಕ್ಕಳೂ ಆಗಿದ್ದರು!! ಇತ್ತ,ಗಾಂಧೀಜಿಯನ್ನೇ ಮೋಹಪರವಶಗೊಳಿಸಿದ ಆಕೆಗೂ ಮದುವೆಯಾಗಿತ್ತು.ಮಕ್ಕಳಿದ್ದರು.ಅಷ್ಟೇ ಅಲ್ಲಾ, ಅಕೆಯ ಗಂಡ ಗಾಂಧೀಜಿಯನ್ನು,ಅವರ ನಾಯಕತ್ವವನ್ನು ಬಹುವಾಗಿ ಮೆಚ್ಚಿಕೊಂಡಿದ್ದ. ಇವತ್ತು ಗಾಂಧೀಜಿಯನ್ನು ಯುಗಪುರುಷ, ದೈವಾಂಶಸಂಭೂತ,ರಾಷ್ಟ್ರಪಿತ ಎಂದಷ್ಟೇ ಭಾವಿಸಿರುವವರಿಗೆ ಈ ಅಫೇರ್ ನ ಸುದ್ದಿ ವಿಚಿತ್ರವಾಗಿ ಕಾಣಬಹುದು.ಶಾಕ್ ನೀಡಬಹುದು.ವಿಪರ್ಯಾಸ ಅನ್ನಿಸಬಹುದು.ಅಥವಾ ನಂಬಲು ಸಾಧ್ಯವೇ ಇಲ್ಲ ಎಂದು ಉದ್ಗರಿಸುವಂತೆ ಮಾಡಲೂಬಹುದು. ಆದರೆ, ಗಾಂಧೀಜಿಗೂ ಒಂದು ಅಫೇರ್ ಇತ್ತೆಂಬುದು ಸ್ಪಷ್ಟ. ಅಂಥ ಗಾಧೀಜಿಯೇ ಕೆಲ ವರ್ಷಗಳ ಮಟ್ಟಿಗೆ ಹೆಣ್ಣೋಬ್ಬಳ ಮೋಹದಲ್ಲಿ ಮುಳುಗಿದ್ದರು ಎಂಬುದು ಅಷ್ಟೇ ಸತ್ಯ! ಆಕೆ ಸರಳದೇವಿ ಗಾಂಧೀಜಿಯ ಮನಸು ಕದ್ದು, ಕೆಲ ಕಾಲದ ಮಟ್ಟಿಗೆ ಅವರಿಗೆ ಸ್ಫೂರ್ತಿ ದೇವತೆಯೇ ಆಗಿದ್ದಾಕೆಯ ಹೆಸರು ಸರಳಾದೇವಿ. ಆಕೆ ಬೇರೆ ಯಾರು ಅಲ್ಲ.ರವೀಂದ್ರನಾಥ ಟ್ಯಾಗೋರ್ ಅವರ ತಂಗಿಯ ಮಗಳು.ಆ ಕಾಲಕ್ಕೇ ಆಕೆ ಭುವನ ಸುಂದರಿ! 'ಬಂಗಾಳದ ಜೋನ್ ಆಫ್ ಆರ್ಕ್' ಎಂಬ ಬಿರುದೇ ಆಕೆಗಿತ್ತು. ಆ ಕಾಲಕ್ಕೇ ಆಕೆ ಪದವಿ ಪದೆದಿದ್ದಳು. ಲೇಖಕಿಯಾಗಿ ಹೆಸರು ಮಾಡಿದ್ದಳು ಮತ್ತು ಮಧುರಾತಿಮಧುರವಾಗಿ ಹಾಡುತ್ತಿದ್ದಳು.

ಯಾವುದೆ ಸಮಾರಂಭವಿರಲಿ,ಅಲ್ಲಿ ಸರಳಾದೇವಿ ಬಂದಿದ್ದಾಳೆ ಎಂದರೆ ಜನ ಜಾತ್ರೆಯೇ ಸೇರಿಬಿಡುತ್ತಿತ್ತು. ಎಲ್ಲರೂ ಆಕೆಯ ಚೆಲುವನ್ನು ಆರಾಧಿಸುವವರೇ. ಆ ದಿನಗಳಲ್ಲಿ ಪ್ರಮುಖನಾಯಕರು ಅನಿಸಿಕೊಂಡಿದ್ದ ಪ್ರತಿಯೊಬ್ಬರೂ ಸರಳಾದೇವಿಯ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.ಕೆಲವರಂತೂ ಆಕೆಗಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ದರಾಗಿದ್ದರು! ಇಂಥ ಸುರಸುಂದರಿಗೆ ಗಾಂಧೀಜಿಯೂ ಮರುಳಾದರು ಅಂದರೆ ಅದರಲ್ಲಿ ಅಚ್ಚರಿ ಏನಿದೆ? 1901ರಲ್ಲಿ ಕೋಲ್ಕತ್ತಾದಲ್ಲಿ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿಯೂ ಬಂದಿದ್ದರು.ಆಗ ಸರಳಾದೇವಿಗೆ 29 ವರ್ಷ. ಇನ್ನೂ ಮದುವೆಯಾಗಿರಲಿಲ್ಲ. ಆ ಹೊತ್ತಿಗೇ ಆಕೆ ಗಾಯಕಿ ಮತ್ತು ಲೆಖಕಿಯಾಗಿ ಹೆಸರು ಮಡಿದ್ದರು. 'ಭಾರತಿ' ಹೆಸರಿನ ಪತ್ರಿಕೆಯನ್ನೂ ಹೊರತರುತಿದ್ದರು. ಸರಳಾದೇವಿ ರಾಗ ಸಂಯೋಜಿಸಿದ್ದ ಗೀತೆಯೊಂದನ್ನು 58ಮಂದಿ ಗಾಯಕ/ಗಾಯಕಿಯರು ಒಟ್ಟಾಗಿ ಹಾಡುವ ಮೂಲಕವೇ ಅಧಿವೇಶನ ಆರಂಭವಾಗಿತ್ತು. ಇದು ಗಾಂಧೀಜಿ ಮತ್ತು ಸರಳಾದೇವಿಯವರ ಮೊದಲ ಭೇಟಿ. ಈ ಸಂದರ್ಭದಲ್ಲಿ ಇಬ್ಬರು ಮದ್ಯೆ ವಿಶೇಷ ಮಾತುಕತೆ,ಪರಸ್ಪರ ಮೆಚ್ಚುಗೆಯ ಮಾತು ಎರಡೂ ಕೇಳಿಬರಲಿಲ್ಲ.ಆದರೆ, ಆ ಹೊತ್ತಿಗಾಗಲೇ ಆಫ್ರಿಕಾದಲ್ಲಿ ವರ್ಣಬೇಧನೀತಿಯ ವಿರುದ್ದ ಸಮರ ಸಾರಿ ಹೆಸರಾಗಿದ್ದ ಗಾಂಧೀಜಿಯಿಂದ ಒಂದು ಲೇಖನ ಬರಸಿದರೆ ಹೇಗೆ ಎಂಬ ಯೋಚನೆ ಸರಳಾದೇವಿಗೆ ಬಂತಂತೆ. ಮುಂದೆ,1940ರಲ್ಲಿ ಬರೆದ ಪುಸ್ತಕವೊಂದರಲ್ಲಿ ಆಕೆಯೇ ಹೀಗೆ ಹೇಳಿಕೋಂಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಸರಳಾದೇವಿಯವರ ತಂದೆ ಜಾನಕಿನಾಥ ಗೋಸಾಲ್ ಅವರು ಗಾಂಧೀಜಿಗೆ ಪರಿಚಿತರೇ ಆಗಿದ್ದರು.ಅವರು ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿದ್ದರು.ಬಾಲ್ಯದಿಂದಲೂ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು,ಸ್ವಾತಂತ್ರ್ಯ ಸಂಗ್ರಾಮದ ಮಾತುಗಳನ್ನು ಕೇಳಿಕೊಂಡು ಬೆಳೆದ ಪರಿಣಾಮ-ಸರಳಾದೇವಿ ಕೂಡ ಸ್ವಾತಮತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದ ಯುವಕರಿಗೆ ಬಹಿರಂಗವಾಗಿ ಪ್ರೋತ್ಸಾಹ ನೀಡುವ ಮೂಲಕ ಪೊಲೀಸರ ಕೆಂಗಣ್ಣಿಗೂ ಬಿದ್ದಿದ್ದರು. ಇಂಥ ಹಿನ್ನೆಲೆಯ ಸರಳಾದೇವಿಗೆ1905 ರಲ್ಲಿ ಪಂಜಾಬ್ ನ ರಾಮ್ ಭುಜ್ ದತ್ ಚೌಧುರಿ ಎಂಬಾತನೊಂದಿಗೆ ಮದುವೆಯಾಯಿತು. ಆರ್ಯ ಸಮಾಜಿಯಾಗಿದ್ದ ಚೌಧುರಿಗೆ ಇದು ಮೂರನೇ ಮದುವೆ. ಮೊದಲ ಇಬ್ಬರು ಹೆಂಡಿರೂ ತೀರಿಕೊಂಡಿದ್ದರು. ಸ್ವಾರಸ್ಯವೆಂದರೆ ರಾಮ್ ಭುಜ್ ದತ್ ಚೌದುರಿ ಕೂಡ 'ಹಿಂದುಸ್ತಾನ್' ಹೆಸರಿನ ಪತ್ರಿಕೆಯನ್ನು ಹೊರತರುತಿದ್ದರು. ಪಂಜಾಬ್ ಆಗ ಲಾಹೋರ್ ಗ ಸೇರಿ ಕೊಂಡಿತ್ತು.ಮಗಳು ಬಂಗಾಳದಲ್ಲಿದ್ದು ಪೊಲೀಸರ ಕೆಂಗಣ್ಣಿಗೆ ಬೀಳುವುದಕ್ಕಿಂತ ಲಾಹೋರ್ ನಲ್ಲಿ ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದೇ ಆಕೆಯ ತಾಯಿ-ತಂದೆ ಇಚ್ಚಿಸಿದ್ದರು. 1901ರಲ್ಲಿ ಪರಿಚಯವಾಯ್ತಲ್ಲ, ಅಂದನಿಂದ 1919ರವರೆಗೆ ಗಾಂಧೀಜಿ ಮತ್ತು ಸರಳದೇವಿಯರ ಸಂಬಂಧ ಹೇಗಿತ್ತು `ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. 1919ರಲ್ಲಿ ಲಾಹೋರ್ ಗೆ ಬರುತ್ತಾರೆ ಗಾಂಧೀಜಿ. ಆ ಸಮಯದಲ್ಲಿ ಸರಳಾದೇವಿಯ ಪತಿ ರಾಮ್ ಭುಜ್ ದತ್ ಚೌಧುರಿ ಜೈಲು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಸರಳಾದೇವಿಯನ್ನು ಭೇಟಿಯಾಗುವ ಗಾಂಧಿಜಿ, ಕೆಲ ದಿನಗಳ ನಂತರ ಸಾಬರಮತಿ ಆಶ್ರಮದ ಅನುಸೂಯಾ ಬೆನ್ ಎಂಬಾಕೆಗೆ ಹೀಗೆ ಬರೆಯುತ್ತಾರೆ: 'ಇಲ್ಲಿ ಸರಳಾದೇವಿ ನನ್ನನ್ನು ಚೆನ್ನಾಗಿ, ತುಂಬಾ ಚೆನ್ನಾಗಿ ನೋಡಿಕೊಳ್ತಾ ಇದ್ದಾಳೆ.ಆಕೆಯ ಸಾನಿಧ್ಯದ ನನ್ನಲ್ಲಿ ಹೊಸ ಉತ್ಸಾಹ ತುಂಬಿದೆ.ನನ್ನ ಪಾಲಿಗಂತ್ತೂ ಆಕೆ ಸ್ಫೂರ್ತಿ ದೇವತೆಯೇ ಆಗಿದ್ದಾಳೆ'.... ಮುಂದೆ 1920ರ ಹೊತ್ತಿಗೆ ಗಾಂಧೀಜಿಯ ಮಾತು ಸಂಪೂರ್ಣವಾಗಿ ಬದಲಾಗುತ್ತದೆ 'ಸರಳಾದೇವಿ ಮತ್ತು ನಾನು ಮಾನಸಿಕವಾಗಿ ಮದುವೆಯಾಗಿದ್ದೇವೆ' ಅಂದುಬಿಡುತ್ತಾರೆ!

'ಸರಳಾದೇವಿಯೂ, ನಾನೂ ಮಾನಸಿಕವಾಗಿ ಒಂದ್ದಾಗಿದ್ದೇವೆ' ಎಂದು ಘೋಷಿಸಿದರಲ್ಲ ಆಗ ಸರಳಾದೇವಿಗೆ 47 ವರ್ಷ. ಆದರೇನಂತೆ? ಆಕೆಯ ಚೆಲುವು ಒಂದಿನಿತೂ ಮಾಸಿರಲಿಲ್ಲ. ಆ ನಡುವಯಸ್ಸಿನಲ್ಲೂ ಆಕೆ ಅಪ್ಸರೆಯಂತೆ ಕಾಣುತಿದ್ದಳು.ಮಧುರವಾಗಿ ಹಾಡುತಿದ್ದಳು. ಮುದ್ದಾಗಿ ಬರೆಯುತಿದ್ದಳು.ಜೊತೆಗಿರುವವರಿಗೆ ಇಷ್ತವಾಗುವಂತೆಯೇ ನಡೆದುಕೊಳ್ಳುತ್ತಿದ್ದಳು. ಸರಳಾದೇವಿಯ ಈ ವರ್ತನೆ ಗಾಂಧೀಜಿಗೆ ಎಷ್ಟೊಂದು ಇಷ್ಟವಾಯಿತು ಅಂದರೆ ಪತ್ನಿ ಕಸ್ತೂರಿಬಾ ಅವರನ್ನು ಈಕೆಯೊಂದಿಗೆ ಕ್ಷಣ ಕ್ಷಣವೂ ಹೋಲಿಸಿ ನೋಡುತಿದ್ದರು. ಪ್ರತಿ ಸಂದರ್ಭದಲ್ಲೂ ಅವರ ಮನಸ್ಸು ಸಹಜವಾಗಿಯೇ ಸರಳಾದೇವಿಗೆ ಹೆಚ್ಚು ಅಂಕ ಕೊಡುತಿತ್ತು! ಮುಂದೆ, 1935ರಲ್ಲಿ ಅಮೆರಿಕಾದ ಹೆಸರಾಂತ ಬರಹ ಗಾರ್ತಿ ಮಾರ್ಗರೇಟ ಸಿಂಗರ್ ಅವರೊಂದಿಗೆ ಮಾತಾಡುತ್ತಾ ಗಾಂಧೀಜಿ ಹೀಗೆ ಹೇಳಿದ್ದಾರೆ; 'ನಿಮಗೂ ಗೊತ್ತಿರಬಹುದು; ಕಸ್ತೂರಿಬಾ ಅನಕ್ಷರಸ್ಥೆ, ಸಾಧಾರಣ ಸುಂದರಿ, ವಿದೇಶಿ ಸಂಸ್ಕೃತಿಯ ಗಂಧ-ಗಾಳಿ ಅರಿಯದವಳು. ಆರಂಭದಲ್ಲಿ ಆಕೆಯ ಸಾನ್ನಿದ್ಯ ನನಗೆ ಭೇಡವಾಗಿತ್ತು. ಒಂದು ಸಂದರ್ಭದಲ್ಲಂತೂ ಒಬ್ಬ ಸುಶಿಕ್ಷಿತ, ಸ್ಫುರದ್ರೂಪಿ ಹೆಂಗಸಿನಲ್ಲಿ ನಾನು ಅನುರಕ್ತನಾಗಿಬಿಟ್ಟಿದ್ದೆ.. ಆದರೆ ಅದೃಷ್ಟವಶಾತ್ ಆ ಮೋಹದ ಬಲೆಯಿಂದ ಮುಕ್ತನಾದೆ!' ಗಾಂಧೀಜಿ ಹೇಳಿ ಕೊಂಡ ಆ ಸುಶಿಕ್ಷಿತ ಹೆಂಗಸು ಬೇರೆ ಯಾರೂ ಅಲ್ಲ ಆಕೆಯೇ ಸರಳಾದೇವಿ!


ಇತ್ತ ಸರಳಾದೇವಿ ಕತೆಯೂ ಭಿನ್ನವಾಗಿರಲಿಲ್ಲ. ಆಕೆ ಗಾಂಧೀಜಿಯನ್ನು ಪ್ರೀತಿಸುತಿದ್ದಳು. ಗೌರವಿಸುತಿದ್ದಳು. ಆರಾಧಿಸುತಿದ್ದಳು. ಗಾಂಧೀಜಿ ಜೊತೆಗಿದ್ದಾರೆ ಅಂದರೆ ಆಕೆಯ ಸಂತಸ ಇಮ್ಮಡಿಸುತ್ತಿತ್ತು. ತನ್ನಂತೆಯೇ ಗಾಂಧೀಜಿ ಕೂಡ ಸಂಸಾರಸ್ಥ ಎಂದು ಹೊತ್ತಾದ ನಂತರ ಕೂಡ ಆಕೆಯ ನಿಲುವು ಬದಲಾಗಲಿಲ್ಲ. ಬದಲಿಗೆ, ಮೊದಲ ಹೆಂಡತಿ ತನಗೆ ಸರಿಯಾದ ಜೋಡಿಯಲ್ಲ ಅನಿಸಿದರೆ, ಗಂಡನಾದವನು ಎರಡನೇ ಮದುವೆಯಾದರೆ ತಪ್ಪೇನೂ ಇಲ್ಲ ಎಂದೇ ಆಕೆ ಪದೇಪದೆ ಹೇಳುತಿದ್ದಳು.ಇಂಥ ಸಂದರ್ಭದಲ್ಲೆಲ್ಲ ಗಾಂಧೀಜಿ ಬೇರೆಡೆಲೆ ಮುಖ ತಿರುಗಿಸಿಕೊಂಡು ನಿಂತು ಬಿಡುತ್ತಿದ್ದರು! ಆಕೆ ಬಹುಪತ್ನಿತ್ವದ ಪ್ರತಿಪಾದಕಿ-ಗಾಂಧೀಜಿ ಆ ವಿಷಯದ ಕಟ್ಟಾ ವಿರೋಧಿ. ಹಾಗಿದ್ದರೂ ಇಬ್ಬರ ಮಧ್ಯಒಲವಿನ ಗುಲಾಬಿ ಅರಳಿತು ನಗುತ್ತಲೇ ಇತ್ತು.ಗಾಂಧೀಜಿಯ ಮೇಲಿನ ಪ್ರೇಮದಿಂದಲೇ ಅವರ ಸತ್ಯಾಗ್ರಹ ಚಳುವಳಿ, ಖಾದಿ ಪ್ರಚಾರದ ಸಭೆಗಳಲ್ಲಿ ಸರಳಾದೇವಿ ಪಾಲ್ಗೊಂಳು. ಗಾಂಧೀಜಿಯ ಜೊತೆಜೊತೆಯಲ್ಲೇ ನಡೆದು ಹೋದಳು.


ಗಾಂಧೀಜಿ-ಸರಳಾದೇವಿ ಪ್ರೇಮ ಪ್ರಕರಣ ಪರಾಕಾಷ್ಠೆ ತಲುಪಿದ್ದು ಮತ್ತು ಅಂತ್ಯ ಗೊಂಡದ್ದು 1920 ರಲ್ಲಿ! ಆ ವರ್ಷದ ಆರಂಭದಲ್ಲಿ ಸರಳದೇವಿಯ ಪುತ್ರ ದೀಪಕ್ ಸಾಬರಮತಿ ಆಶ್ರಮಕ್ಕೆ ಬಂದ. ಅದು ವಿಪರೀತ ಶಿಸ್ತಿನ ಆಶ್ರಮ . ತಮಾಷೆಯೆಂದರೆ, ದೀಪಕ್ ಗಾಗಿ ಎಲ್ಲಾ ಕಟ್ಟುಪಾಡುಗಳನ್ನು ಸ್ವತಃಗಾಂದೀಜಿಯೇ ಸಡಿಲಿಸಿ ಬಿಟ್ಟರು! ಮುಂದೆ ಮಾರ್ಚ್ ನಲ್ಲಿ ಸರಳಾದೇವಿಯೇ ಆಶ್ರಮಕ್ಕೆ ಬಂದರು. ಆಗ ಗಾಂದೀಜಿ ಗಂಟೆಗಟ್ಟಲೆ ಆಕೆಯೊಂದಿಗೆ ಹರಟೆಗೆ ಕೂತುಬಿಡುತ್ತಿದ್ದರು. ಪರಿಣಾಮ – ಆ ಹೆಂಗಸಿನ ಜೊತೆ ಬಾಪೂ ಅವರದ್ದು ಎಂಥ ವ್ಯವಹಾರ ಎಂಬಮಾತು ಆಶ್ರಮವಾಸಿಗಳಿಂದಲೇ ಬಂತು.

ವಿಪರ್ಯಸ ಏನೆಂದರೆ- ಸರಳಾದೇವಿಯ ಮೋಹದಲ್ಲಿ ಸಂಪೂರ್ಣ ವಾಗಿ ಮುಳುಗಿದ್ದ ಗಾಂಧೀಜಿಗೆ ಇಂಥಾ ಮಾತುಗಳತ್ತ ಗಮನವೇ ಇರಲಿಲ್ಲ . ಅವರು ಯಾವುದೋ ಧ್ಯಾನಕ್ಕೆ ಬಿದ್ದವರಂತೆ "ಸರಳಾದೇವಿ ನನ್ನ ಶಕ್ತಿ ದೇವತೆ. ಆಕೆ ಮಧುರ ಕಂಠದ ಕೋಗಿಲೆ . ಆಕೆಯ ಜೊತೆಯಲ್ಲಿ ನವಭಾರತ ನಿರ್ಮಾಣ ಸಾಧ್ಯ" ಎಂದೆಲ್ಲಾ ಬರೆದುಬಿಟ್ಟಿದ್ದರು!

ಗಾಂಧೀಜಿಯ ಈ ಪ್ರೇಮದ ಕಥೆ ಚಕ್ರವರ್ತಿ ರಾಜಗೋಪಾಲಾಚಾರಿ, ಗಾಂಧೀಜಿಯ ಕಾರ್ಯದರ್ಶಿಮಹದೇವ ದೇಸಾಯಿ, ಕಸ್ತೂರಿಬಾ,ರವಿಂದ್ರನಾಥ ಟ್ಯಾಗೂರ್ ಎಲ್ಲರಿಗೂ ಗೊತ್ತಿತ್ತು ಗಾಂಧೀಜಿಯನ್ನು ಯಾವ ಸಂದರ್ಭದಲ್ಲೂ ಪ್ರಶ್ನಿಸದಿದ್ದ. ಆಕ್ಷೇಪಿಸದಿದ್ದ ಕಸ್ತೂರಿಬಾ ಈ ವಿಷಯ ತಿಳಿದು ಖಿನ್ನರಾಗಿದ್ದರು. ವಿಪರೀತ ದುಃಖಿಸಿದ್ದರು.ಅವರಿಗಿಂತ ಹೆಚ್ಚಾಗಿ ಗಾಂದಿಜಿಯ ಪುತ್ರ ದೇವದಾಸ್ ಘಾಸಿಗೊಂಡಿದ್ದ.ಸರಳಾದೇವಿಯೊಂದಿಗೆ ಸಂಬಂದ ಮುಂದುವರೆಸುವುದು ಬೇಡವೇ ಬೇಡವೆಂದು ಮೊದಲಿನಿಂದಲೂ ಎಚ್ಚರರಿಸುಲೇ ಇದ್ದರು. ಆದರೆ ಗಾಂಧೀಜಿ ಆ ಮಾತುಗಳಿಗೆ ಕಿವಿಗೊಡುತ್ತಲೇ ಇರಲಿಲ್ಲ. ಯಾವಾಗ ಸಾಬರಮತಿ ಆಶ್ರಮದಲ್ಲಿಯೂ ಗಾಂಧಿ ಮತ್ತು ಸರಳಾದೇವಿ ಅನ್ಯೋನ್ಯವಾಗಿದ್ದಾರೆ ಎಂಬ ಸುದ್ದಿ ಬಂತೋ, ಅಂದೇ ರಾಜಾಜಿ ಖಾರವಾದ ಪತ್ರವೊಂದನ್ನು ಗಾಂಧೀಜಿಗೆ ಬರೆದರು. ಅದರ ಸಾರ ಹೀಗಿದೆ:
'ನನ್ನ ಪ್ರೀತಿಯ ಬಾಪೂ' ನಿಮ್ಮ ಈಗಿನ ಸ್ಥತಿ ನೀಡಿ ನಗಬೇಕೋ ಅಳಬೇಕೋ ತಿಳಿನುತ್ತಿಲ್ಲ. ಸರಳಾದೇವಿ ಒಂದು ಮಾಯೆ ಎಂಬುದು ನಿಮಗೇಕೆ ಅರ್ಥವಾಗುತ್ತಿಲ್ಲ. ನಿಮ್ಮಿಬ್ಬರ ಪ್ರೇಮದ ಕಥೆ ಕೇಳಿ ನಿಮ್ಮ ಮಕ್ಕಳು ಹೇಗೆ ಪ್ರತಿಕ್ರಿಯಿಸಬಹುದು, ಯೋಚಿಸಿಧ್ದೀರಾ? ಇಡೀ ದೇಶ ನಿಮ್ಮೆಡೆಗೆ ಅಭಿಮಾನದಿಂದ ನೋಡುತ್ತಿದೆ. ಆದರೆ, ಅದೇ ಕ್ಷಣದಲ್ಲಿ ನೀವು ಹೆಣ್ಣೊಬ್ಬಳೆಡೆಗೆ ಆಸೆಯಿಂದ ನೋಡುತ್ತ ನಿಂತು ಬಿಟ್ಟಿದ್ದೀರಿ! ಇದು ನಾಚಿಕೆಯ ವಿಷಯವಲ್ಲವೆ? ನೀವಾದರೋ-ಪ್ರಖರ ಸೂರ್ಯ. ಆಕೆ ಎಣ್ಣೆ ಇದ್ದಷ್ಟು ಹೊತ್ತು ಮಾತ್ರ ಉರಿದ ದೀಪ. ಈ ಮಾತು ಅರ್ಥ ಮಾಡಿಕೊಳ್ಳಿ. ಆ ಮೋಹದ ಬಲೆಯಿಂದ ಬೇಗ ಹೊರಬನ್ನಿ.
ಈ ಪತ್ರ ನಿಜಕ್ಕೂ ಗಾಂಧೀಜಿಯ ಮೇಲೆ ಪ್ರಭಾವ ಬೀರಿತು. ಅದುವರೆಗೂ ಸರಳಾದೇವಿಯ ಮೋಹದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಮರೆತಿದ್ದ ಗಾಂಧೀಜಿ ತಕ್ಷಣವೇ ಎಚ್ಚರಾದರು.ಈ ಅಫೇರ್ ನಿಂದಾಗಿ ತಮ್ಮ ಇಮೇಜ್ ಹಾಳಾಗುತ್ತೆ ಎಂದು ಹೆದುರಿದರೋ ಬೆಳೆದ ಮಕ್ಕಳ ಮುಂದೆ ನಾನು ಸಣ್ಣವ ಆಗಬಾರದೆಂದು ಯೋಚಿಸಿದರೋ ಅಥವಾ ದೇಶದ ಜನರೆಲ್ಲ ನನ್ನನ್ನು ಅಪಹಾಸ್ಯ ಮಾಡುವರೆಂದು ಲೆಕ್ಕ ಹಾಕಿದರೋ....ಭಗವಂತ ಬಲ್ಲ. ಆದರೆ ರಾಜಾಜಿಯ ಪತ್ರ ಓದಿದ ತಕ್ಷಣವೇ-'ಪ್ರೀತಿಯ ರಾಜಾಜಿ, ನಿಮ್ಮ ಎಚ್ಚರದ ಮಾತು, ನನ್ನ ಹೆಂಡತಿ,ಮಕ್ಕಳ ಒಲುಮೆ ದೊಡ್ಡ ಗಂಡಾಂತರದಿಂದ ನನ್ನನ್ನು ಕಾಪಾಡಿತು. ನಮ್ಮ ಸಂಬಂಧವನ್ನು ಇಂದೇ ಮುರಿದುಕೊಳ್ಳುತ್ತಿದ್ದೇನೆ' ಎಂದು ಟೆಲಿಗ್ರಾಂ ಕೊಟ್ಟರು. ಅಷ್ಟೇ ಅಲ್ಲ. ಅಂದೇ ಕೂತು ಸರಳಾದೇವಿಗೂ ಒಂದು ಸುದೀರ್ಘ ಪತ್ರ ಬರೆದರು. ಆ ಪತ್ರದ ಪೂರ್ಣ ಪಾಠ ಹೀಗಿದೆ:
'ಪರಿಚಯವಾದ ದಿನದಿಂದಲೂ ನನ್ನ ಪ್ರೇಮವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದೇನೆ. ನಾವಿಬ್ಬರೂ ಭಾವನಾತ್ಮಕವಾಗಿ, ಮಾನಸಿಕವಾಗಿ ಒಂದಾಗಿದ್ದೇವೆ ಎಂದು ಹೇಳಿದ್ದೇನೆ ಇವತ್ತು ಯೋಚಿಸಿದರೆ-ದೈಹಿಕ ಕಾಂಕ್ಷೆಗಳೇ ಇಲ್ಲದ ಗಂಡು-ಹೆಣ್ಣಿನ ಮಧ್ಯೆ ಮಾತ್ರ ಅಂಥ ಸಂಬಂಧ ಸಾಧ್ಯ ಅನಿಸುತ್ತಿದೆ.ಅಂಥದೊಂದು ಸಂಬಂಧ ಅಣ್ಣ-ತಂಗಿ, ತಂದೆ-ಮಗಳ ಮಧ್ಯೆ ಮಾತ್ರ ಉಳಿದಿರಲು ಸಾದ್ಯ. ಹಾಗೆಯೇ ಬ್ರಹ್ಮಚರ್ಯಪಾಲಿಸುವ ಗಂಡು-ಹೆಣ್ಣಿನ ಮಧ್ಯೆಯೂ ಅಂಥದೊಂದು ಸಂಬಂಧ ಉಳಿಯಲು ಸಾಧ್ಯ. ಅಂಥದೊಂದು ಸಂಬಂಧವನ್ನು ನಿನ್ನೊಂದಿಗೆ ಹೊಂದಿರಬೇಕೆಂಬ ಅಭಿಲಾಷೆ ನನ್ನದು. ಆದರೆ ಅದಕ್ಕೆ ನನ್ನ ಎಲ್ಲ ಕೆಲಸಗಳಿಗೆ, ಹೋರಾಟಗಳಿಗೆ, ಚಿಂತನೆಗಳಿಗೆ ನೀನು ಸ್ಫೂರ್ತಿಯಾಗಿದ್ದೆ. ನನ್ನ ಪರಮಾಪ್ತೆಯಾಗಿದ್ದೆ.ಆದರೆ ಅಂಥದೊಂದು ಬಾಂಧವ್ಯ ಮುಂದೆ ಸಾದ್ಯವಿಲ್ಲ....ಇದು ನಿನಗೆ ನನ್ನ ಕಡೆಯ ಮತ್ತು ಸುದೀರ್ಘ ಪತ್ರ!'
ಹೀಗೆ ಬರೆದ ಗಾಂಧೀಜಿ ಕಡೆಗೆ 'your' L.G' ಎಂದು ಪತ್ರ ಮುಗಿಸುತ್ತಾರೆ. ಇಲ್ಲಿL. G.ಅಂದರೆ Law Giver (ನ್ಯಾಯ ಹೇಳುವವನು ಅಥವಾ ತೀರ್ಪುಗಾರ ಎಂದರ್ಥ!)
ಈ ಪತ್ರ ಓದಿದಾಗ ಸರಳಾದೇವಿ ಪ್ರತಿಕ್ರಿಯಿಸಿದರು ಅಂದರೆ-ಆಕೆ ಕ್ಷಣ ಕಂಪಿಸಿದರಂತೆ. ಆ ಪತ್ರವನ್ನೇ ಮತ್ತೆ ಮತ್ತೆ ಓದಿದರಂತೆ.ಭೋರಿಟ್ಟು ಅತ್ತರಂತೆ.ಇಷ್ಟು ದಿನಗಳ ಮಾತು,ಭಾಷೆ,ಭರವಸೆ, ಇಬ್ಬರ ಮದ್ಯೆ ಪುಟಿದೆದ್ದ ಆಸೆ...ಈ ಯಾವುದಕ್ಕೂ ಅರ್ಥವೇ ಇಲ್ವಾ ಎಂದು ಬಿಕ್ಕಳಿಸುತ್ತಾ ಕೇಳಿದರಂತೆ.
ಎಲ್ಲ ಸರಿ, ಈ ಅಫೇರ್ ನ ವಿಷಯ ತಿಳಿದ ನಂತರ ಕೂಡ ಸರಳಾದೇವಿಯ ಪತಿರಾಯ ರೇಗಲಿಲ್ವಾ? ಆ ದಂಪತಿಯ ಮದ್ಯೆ ಜಗಳ ಆಗಲಿಲ್ವಾ ಸರಳಾದೇವಿಯ ಮಗ ಗಾಂಧೀಜಿಗೆ ಅವಾಜ್ ಹಾಕಲಿಲ್ವಾ....ಇಂಥ ಯಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ. ಬದಲಿಗೆ,1901ರಲ್ಲಿ ಶುರುವಾದ ಗಾಂಧೀಜಿಯ ಪ್ರೇಮ ಪ್ರಕರಣ 1920ರಲ್ಲಿ ಕೊನೆಗೊಂಡಿತು.ನಂತರದ ದಿನಗಳಲ್ಲಿ ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಬ್ಯುಸಿಯಾದರು.ಸರಳಾದೇವಿ 1945ರಲ್ಲಿ ತೀರಿಕೊಂಡರು. ಎಂದಷ್ಟೇ ವಿವರಣೆ ದಕ್ಕುತ್ತದೆ.


 

ಚಿತ್ರರಂಗ ಪ್ರಳಯ...

ಚಿತ್ರರಂಗ ಪ್ರಳಯ...

ಪ್ರಳಯಕ್ಕೂ ಸಿನಿಮಾಕ್ಕೂ ನಂಟಿದೆ. ಪ್ರಳಯವೆಂಬ್‌ ಠುಸ್‌ ಪಟಾಕಿಗೆ ಶತಮಾನಗಳ ಇತಿಹಾಸ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡ ಹಾಲಿವುಡ್‌ ಸಿನಿಮಾ ನಿರ್ಮಾಪಕರು ಕೋಟ್ಯಂತರ ರೂ. ಲಾಭ ಮಾಡಿದ್ದಾರೆ. ಈಗ್ಗೆ ಸುಮಾರು 180 ಚಿತ್ರಗಳು, ಪ್ರಳಯ, ಭೂಕಂಪ, ಸುನಾಮಿಯಂಥವುಗಳನ್ನು ಆಧರಿಸಿದ್ದಾಗಿದೆ. 2009ರಲ್ಲಿ ತೆರೆ ಕಂಡ '2012' ಚಿತ್ರಕ್ಕೆ ಹೂಡಿಕೆಯಾಗಿದ್ದು 1 ಸಾವಿರ ಕೋಟಿಯಂತೆ. ಬಂದ ಲಾಭ 4 ಸಾವಿರ ಕೋಟಿ. 2012ರ ನಂತರ ಆಗುವ ಪ್ರಳಯ ಹೇಗಿರಬಹುದು, ಮನುಷ್ಯನ ದೀನ ಸ್ಥಿತಿ ಹೇಗಿರುತ್ತದೆ ಎನ್ನುವುದೇ ಈ ಚಿತ್ರದ ವಸ್ತು ವಿಷಯ. 20ನೇ ಶತಮಾನದ ಅಂಚಿನಲ್ಲಿ ಸುನಾಮಿ, ಡೈನೋಸಾರಸ್‌, ನೈಸರ್ಗಿಕ ವಿಕೋಪಗಳನ್ನು ಬಳಸಿಕೊಂಡು ಚಿತ್ರಗಳನ್ನು ಮಾಡಿ ಹಣ ಮಾಡಿದ್ದಾರೆ. ಈ ಸಾರಿ ಪ್ರಳಯವನ್ನೇ ಆಧರಿಸಿದ ಹಲವು ಚಿತ್ರಗಳು ಈಗ ದುಡ್ಡು ಮಾಡಿವೆ. ಜನರಲ್ಲಿ ಭಯದ ಕಲ್ಪನೆ ಮೂಡಿಸುವಲ್ಲಿ ಸಿನಿಮಾಗಳ ಪಾತ್ರವೂ ದೊಡ್ಡದು.

ಪ್ರಳಯದ ಬಗ್ಗೆ ನಾಸಾ ಹೀಗನ್ನುತ್ತೆ ..

ಪ್ರಳಯದ ಬಗ್ಗೆ ನಾಸಾ ಹೀಗನ್ನುತ್ತೆ ..

ನಿಬಿರು ಎಂಬ ಗ್ರಹ ಇದೆ. ಇದು ಭೂಮಿಗೆ ಅಪ್ಪಳಿಸಿದರೆ ಮುಗೀತು. ಎಲ್ಲ ಗ್ರಹಗಳು ಸರಳ ರೇಖೆಯಲ್ಲಿ ಬಂದು ಸಂಧಿಸುತ್ತದೆ. ಇಂಥ ಸಮಯದಲ್ಲಿ ಭೂಮಿ ಛಿದ್ರ ಛಿದ್ರ. ಮಾಯಾನ್‌ ಕ್ಯಾಲೆಂಡರ್‌ ಅಂತ ಒಂದಿದೆ. ಅದು 21, ಡಿಸೆಂಬರ್‌, 2012ಕ್ಕೆ ಕೊನೆಗೊಂಡಿದೆ. ಅಂದರೆ ಭೂಮಿ ಆಯಸ್ಸು ಡಿಸೆಂಬರ್‌ 21ರ ತನಕ ಮಾತ್ರ.
-ಇದು ಈಗ ಹಚ್ಚಿರುವ ಪ್ರಳಯದ ಬೆಂಕಿ. ನಾಸಾ ಪ್ರಕಾರ ಗ್ರಹಗಳ ಅಪ್ಪಳಿಸುವಿಕೆ ಒಂದೇ ದಿನಕ್ಕೆ, ಒಂದೇ ವರ್ಷಕ್ಕೆ ಆಗುವಂಥದ್ದಲ್ಲ. ಹಲವು ದಶಕಗಳ ಮೊದಲೇ ಸೂಚನೆ ದೊರೆಯುತ್ತದೆ. ನಿಬಿರು ಗ್ರಹ ಅಪ್ಪಳಿಸುತ್ತದೆ ಎಂದರೆ ಈಗಾಗಲೇ ನಮ್ಮ ಉಪಗ್ರಹಗಳಿಗೆ ಸೂಚನೆ ಸಿಗಬೇಕಿತ್ತು. ಆ ರೀತಿಯಾವುದೇ ಪ್ರಕ್ರಿಯೆ ಆಗಿಲ್ಲ. ಆಮೇಲೆ ಪ್ಲಾನೆಟ್‌ ಅಲೈನ್‌ಮೆಂಟ್‌ ಆಗಾಗ ಆಗುತ್ತಿರುತ್ತದೆ. ಮಾನವನ ಬದುಕಿನ ಚಕ್ರ ಇದ್ದಂತೆ. ಸೌರಚಕ್ರಕ್ಕೆ ಇದು ಸಾಮಾನ್ಯ ಪ್ರಕ್ರಿಯೆ. ಇದನ್ನು ಪ್ರಳಯಕ್ಕೆ ಹೋಲಿಸಿ ಬೆಚ್ಚಿ ಬೀಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ಕಾರಣಕ್ಕೂ ಪ್ರಳಯ ಆಗೋದಿಲ್ಲ. ಬಿ ಹ್ಯಾಪಿ ಅನ್ನತ್ತದೆ ನಾಸಾ.

ಇವಳೇ ಪ್ರಳಯಕ್ಕೆ ಕಾರಣ

ಇವಳೇ ಪ್ರಳಯಕ್ಕೆ ಕಾರಣ

ಡಿಸೆಂಬರ್‌ 21 -2012 ಪ್ರಳಯ. ಹಾಗಂತ ಇಡೀ ಜಗತ್ತಿಗೆ ಪ್ರಳಯದ ಕಾವು ಕೊಟ್ಟಿದ್ದು ಪ್ರಳಯಾಂತಕಿ ನ್ಯಾನ್ಸಿ ಲೇಡರ್‌ ಅನ್ನೋ ಹೆಂಗಸು. ನಾಸಾದವರು ಈಕೆಗೆ ಹುಚ್ಚಿ ಎನ್ನುವ ಪಟ್ಟವನ್ನೇ ಕೊಟ್ಟಿದ್ದಾರೆ. ಈಕೆ ತನ್ನ ಝಾಟ ಟಾಕ್‌ ಅನ್ನೋ ವೆಬ್‌ಸೈಟಲ್ಲಿ ಜಗತ್ತು ಸಾಯುತ್ತದೆ ಅಂತ ಘೋಷಿಸಿಬಿಟ್ಟಳು. 1995ರ ಜನವರಿಯಲ್ಲಿ ಮೊದಲಬಾರಿಗೆ ಈಕೆ ಪ್ರಳಯದ ಮಾತನಾಡಿದಳು. ಆಗಲಿಲ್ಲ. 2003ರಲ್ಲಿ ಪ್ರಳಯ ಅಂದಳು, 2012 ಡಿಸೆಂಬರ್‌ 21ರಂದು ಗ್ಯಾರಂಟಿ ಎಂದಳು. ಈವರೆಗೆ ಪ್ರಳಯದ ಯಾವ ಮುನ್ಸೂಚನೆಯೂ ಸಿಕ್ಕಿಲ್ಲ. ಆದರೆ ಈಕೆ ಪ್ರಳಯದ ಜಪವನ್ನು 9 ವರ್ಷಗಳಿಂದ ಮಾಡುತ್ತಿದ್ದಾಳೆ. ನಂಬುವವರು ಇರುವ ತನಕ ನ್ಯಾನ್ಸಿ ಹೀಗೆ ಆಡುತ್ತಲೇ ಇರುತ್ತಾಳೆ.

ಪ್ರಳಯ ಭಯ ಅನಾದಿ

 ಪ್ರಳಯ ಭಯ ಅನಾದಿ

ಪ್ರಳಯ, ಪ್ರಳಯ, ಪ್ರಳಯ ಅಂಥ ಬೊಬ್ಬೆ ಹೊಡೆಯುವುದ್ದಕ್ಕೂ ಇತಿಹಾಸ ಇದೆ. ಕ್ರಿಶ. 40ನೇ ಇಸ್ವಿಯಲ್ಲಿ ಪ್ರಳಯ ಆಗುತ್ತೆ ಅಂತ ಹೇಳಿಬಿಟ್ಟಿದ್ದರು. ಆಗಲೂ ಇಡೀ ಜಗತ್ತನ್ನು ಹರಡಿ ಕೊನೆಗೆ ಕಿಮ್ಮತ್ತೂ ಸಿಗಲಿಲ್ಲ ಆ ಸುದ್ದಿಗೆ. 40ರಿಂದ ಇಲ್ಲಿತನಕ ಲೆಕ್ಕ ಹಿಡಿದರೆ ಸುಮಾರು 240ಕ್ಕೂ ಹೆಚ್ಚು ಬಾರಿ ಪ್ರಳಯದ ಭೀತಿ ಹುಟ್ಟಿಸಿದ್ದಾರೆ.
ಫೆಬ್ರವರಿ 1.1524 ಲಂಡನ್‌ನಲ್ಲಿ ಥೇಮ್ಸ್‌ ನದಿ ಪ್ರವಾಹ ಆಗುತ್ತದೆ ಎಂಬ ಪುಕಾರಾಯಿತು. ಥೇಮ್ಸ್‌ ನದಿ ಜೊತೆಗೆ ಇದು ಜಗತ್ತಿನ ಸಾವಿನ ಮುನ್ಸೂಚನೆ ಎನ್ನುವ ದೊಡ್ಡ ಟೊಳ್ಳು ಅಲೆ ಎದ್ದಿತು. ಆದರೆ ಏನೂ ಆಗಲಿಲ್ಲ. ಇದೇ ರೀತಿ ಡಿ. 15, 1814 ಜೋನಾ ಸೌತ್ಕಾಟ್‌ ಎಂಬ ಅಮೆರಿಕದ ಮಹಿಳೆ ಏಸು ಕ್ರಿಸ್ತ ನನ್ನ ಹೊಟ್ಟೆಯಲ್ಲಿ ಹುಟ್ಟುತ್ತಾನೆ. ನನ್ನ ಸಾವಿನ ಬಳಿಕೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದು ಹೇಳಿಕೊಂಡು ಪ್ರಳಯದ ಭೀತಿಯನ್ನು ಪಸರಿಸಿದಳು.
ಡಿಸೆಂಬರ್‌ 17-1919ರಲ್ಲಿ ಆಲ್ಬರ್ಟ್‌ ಎನ್ನುವವ ಭೂಮಿಗೆ ಮತ್ತೆರಡು ಗ್ರಹಗಳು ಅಪ್ಪಳಿಸುತ್ತವೆ. ಇದರ ಜಗಳದಿಂದ ಇಡೀ ಭೂಮಿಯೇ ಸರ್ವನಾಶವಾಗುತ್ತದೆ ಅಂತಲೂ ಹೇಳಿದ್ದ. ಈತನ ಮಾತಿನ ಪರಿಣಾಮ ಬರೀ ಶೂನ್ಯ. 1979ರಲ್ಲಿ ಇಟಲಿಯಲ್ಲಿ ಜ್ವಾಲಾಮುಖೀ ಹೆಚ್ಚಾಗಿ ಲಾವಾರಸ ಹೊರ ಬಂದಾಗ ರೋಮ್‌ ಶಾಸ್ತ್ರಜ್ಞರು ಲೆಕ್ಕ ಹಾಕಿ ಭೂ ಮಂಡಲಕ್ಕೆ ಕೊನೆ ಅಂಥ ಷರಾ ಬರೆದರು. ಆದರೆ ಭೂಮಿ ಇನ್ನೂ ಬದುಕಿದೆ.
ಏಪ್ರಿಲ್‌ 20-1980ರಲ್ಲಿ ಲೆಲಾಂಡ್‌ ಎಂಬುವವ ಅಣುಬಾಂಬ್‌ನಿಂದ ಪ್ರಪಂಚಾ ನಾಶ ಹೊಂದುತ್ತದೆ. ಇದಕ್ಕೆ ಕಾರಣ ಅಣುಬಾಂಬ್‌ ಹೊಂದಿರುವ ಸೂಪರ್‌ ಪವರ್‌ ದೇಶಗಳು. ಏಪ್ರಿಲ್‌ 21ಕ್ಕೆ ಇಡೀ ಪ್ರಪಂಚವೇ ನಾಶವಾಗುತ್ತದೆ. 90ರ ದಶಕದಲ್ಲಿ ಎರಡು ಬಾರಿ ಪ್ರಳಯದ ಪುಕಾರುಗಳು ಹಬ್ಬಿಕೊಂಡಿದ್ದವು. 1996ರಲ್ಲಿ ಸದ್ಯದಲ್ಲಿ ಪ್ರಳಯ ಸನ್ನಿಹಿತ ಎಂದಾಗಿ ಸಾರ್ವತ್ರಿಕವಾಗಿ ಸುದ್ದಿಯಾಯಿತು. ಈಗಿನಂತೆಯೇ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯೇ ಆಗಿತ್ತು. ಪ್ರಳಯದ ಹೆಸರಿನಲ್ಲಿ ಪುಸ್ತಕಗಳೇ ಅಚ್ಚಾದವು. ಆದರೆ ಪುಸ್ತಕಗಳು ಬಿಕರಿಯಾದವೇ ಹೊರತು ಪ್ರಳಯ ಮಾತ್ರ ಆಗಲಿಲ್ಲ. 1999 ಮತ್ತು 2000ನೆಯ ಎರಡು ವರ್ಷ ಮತ್ತೂಮ್ಮೆ ಪ್ರಳಯದ ಪುಕಾರು ಹಬ್ಬಿತು.
ಮೇ 31, 1998ರಲ್ಲಿ ದೇವರು ಅಮೇರಿಕಾ ಚಾನಲ್‌ಗ‌ಳಲ್ಲಿ ಕಾಣಿಸಿ ಕೊಳ್ಳುವುದರ ಮೂಲಕ ಅಸ್ತಿತ್ವ ತೋರಿಸಲಿದ್ದಾನೆ. ಇದರ ನಂತರ ಆಗುವುದೇ ಪ್ರಪಂಚ ನಾಶ ಎಂದು ಸುದ್ದಿ ತಂದವರು ಹಾನ್ಸ್‌ ಮಿಚಿಗನ್‌. ಇಷ್ಟು ವರ್ಷ ಆದ ಮೇಲೂ ಜಗತ್ತು ಮತ್ತು ಜನ ಹಾಗೇ ಇದ್ದಾರೆ.

ಗುರುವಾರ, ಡಿಸೆಂಬರ್ 20, 2012

ಧನ್ಯವಾದಗಳು.....

 ಧನ್ಯವಾದಗಳು.....

ನನ್ನ ಎಲ್ಲ ಲೇಖನಗಳನ್ನು ಇದುವರೆಗೆ ಓದಿರುವ ನನ್ನ ಎಲ್ಲ ವಿದೇಶಿ ಕನ್ನಡ ಓದುಗರಿಗೆ  ಹಾಗೂ ನನ್ನ ಭಾರತ ದೇಶದ ಕನ್ನಡಿಗರಿಗೆ ನನ್ನ ಧನ್ಯವಾದಗಳು.....ನನ್ನ ಬರಹಗಳನ್ನು
೧)ಅಮೇರಿಕಾ ಸಂಯುಕ್ತ ಸಂಸ್ಥಾನ,
೨)ರಶಿಯಾ,
೩)ಜರ್ಮನಿ,
೪)ಫ್ರಾನ್ಸ್,
೫)ಇಂಡೋನೇಶಿಯಾ,
೬)ಸೌದಿ ಅರೇಬಿಯಾ,
ಓದುತ್ತಿದ್ದಾರೆ ಎಂದು ಹೇಳಲು ತುಂಬಾ ಸಂತೋಷವಾಗುತ್ತದೆ..ಆದರೆ ಯಾರು ಸಹ ನನ್ನ ಲೇಖನಗಳಿಗೆ ಕಮೆಂಟ್ಸ್ ಬರೆದಿಲ್ಲ...ಅದು ಯಾಕೆ ಎಂದು ಗೊತ್ತಿಲ್ಲ...ದಯಮಾಡಿ ಕಮೆಂಟ್ಸ್ ಬರೆಯಿರಿ...ಆಗಲೇ ನನ್ನ ಲೇಖನಗಳ ತಪ್ಪು ಒಪ್ಪುಗಳು ನನಗೆ ಅರ್ಥವಾಗುತ್ತದೆ.ಹೀಗೆ ನನ್ನ ಲೇಖನಗಳನ್ನು ಓದಿ ನನ್ನಗೆ ಸ್ಪೂರ್ತಿ ತುಂಬಬೇಕಾಗಿ..ನಿಮ್ಮಲ್ಲಿ ವಿನಂತಿ....ಧನ್ಯವಾದಗಳು.....
ಇಂತಿ ನಿಮ್ಮ
ನಾರಾಯಣಗೌಡ..